ದಬಾಂಗ್ ೩ – ಕನ್ನಡ ಚಿತ್ರ ವಿಮರ್ಶೆ

“ಆಕ್ಷನ್ ಸೀನ್ಸ್ ಗಳಿಂದಲೇ ತುಂಬಿರುವ, ಬಲಹೀನ ಕಥೆಯುಳ್ಳ ಸಿನಿಮಾ!”

ಈ ಚಿತ್ರವು ಒಂದು ಹಿಂದಿ ಚಿತ್ರವಾಗಿದ್ದು, ಕನ್ನಡದಲ್ಲೂ ಡಬ್ ಆಗಿ ಬಂದಿದೆ. ಇದು ಡಬ್ಬಿಂಗ್ ಹೋರಾಟಗಾರರಿಗೆ ಮತ್ತು ಕನ್ನಡ ಭಾಷೆಯ ಸಿನಿಮಾ ಪ್ರಿಯರಿಗೆ ಸಿಹಿ ಸುದ್ಧಿಯನ್ನು ತಂದಿದೆ. ದಬಾಂಗ್ ಚಿತ್ರ ಸೀರೀಸ್, ಹಿಂದಿ ಚಿತ್ರರಂಗದಲ್ಲಿ ಅದರಲ್ಲಿರುವ ಒಂದು ಅನನ್ಯ ಶೈಲಿಯಿಂದಾಗಿ ಸಾಕಷ್ಟು ಪ್ರಶಂಸೆಯನ್ನು ಗಳಿಸಿದೆ. ದಬಾಂಗ್ ಚಿತ್ರ ಅಂದ ಕೂಡಲೇ ಸಲ್ಮಾನ್ ಖಾನ್ ರ ಆ ಒಂದು ವಿಶೇಷ ಸ್ಟೈಲ್ ನೆನಪಾಗುತ್ತದೆ. ಈ ಚಿತ್ರವು ದಬಾಂಗ್ ಸೀರೀಸ್ ನ್ ಮೂರನೇ ಆವೃತ್ತಿಯಾಗಿದೆ.

ಚಿತ್ರದ ಕಥೆಯು ಮೊದಲೆರಡು ಆವೃತ್ತಿಗಳಿಗೆ ಹೊಂದಿಕೊಂಡಿದ್ದರಿಂದ ನೀವು ಮೊದಲೆರಡು ಆವೃತ್ತಿಗಳನ್ನು ನೋಡಿದರೆ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಈ ಚಿತ್ರವು ಮುಖ್ಯವಾಗಿ ಚುಲ್ಬುಲ್ ಪಾಂಡೆ ಅವರ ಎದುರಾಳಿ, ಬಲ್ಲಿ ಸಿಂಗ್ ಅನ್ನುವ ದರೊಡೆಕೋರನ ಜೊತೆ ಹೇಗೆ ಆಗುತ್ತದೆ ಎಂದು ತೋರಿಸುತ್ತದೆ. ಚುಲ್ಬುಲ್ ಪಾಂಡೆ ಹೇಗೆ ಎಲ್ಲರ ಪ್ರೀತಿಯ ಪೊಲೀಸ್, ಅಂದರೆ ರಾಬಿನ್ ಹುಡ್ ಪಾಂಡೆ ಆಗುತ್ತಾನೆ ಹಾಗೂ ಬಲ್ಲಿ ಸಿಂಗ್ ಜೊತೆ ಅವನಿಗಿರುವ ಹಳೇಯ ಸಂಬಂಧ ಏನು ಅಂತ ಚಿತ್ರ ತೋರಿಸುತ್ತದೆ.

ಚಿತ್ರದ ಕಥಾವಸ್ತು ಪ್ರೇಕ್ಷಕನಿಗೆ ಕುತೂಹಲ ಮೂಡಿಸುವುದರಲ್ಲಿ ಪೂರ್ತಿಯಾಗಿ ವಿಫಲವಾಗುತ್ತದೆ. ಚಿತ್ರದ ಕಥೆಯನ್ನು ಸುಲಭವಾಗಿ ಊಹಿಸಬಹುದು. ಚಿತ್ರವು ಅವಶ್ಯಕತೆಗಿಂತ ಜಾಸ್ತಿನೇ ಆಕ್ಷನ್ ಸೀನ್ಸ್ ಗಳನ್ನು ಪ್ರೇಕ್ಷಕನ ಮುಂದಿರಿಸುತ್ತದೆ. ಚಿತ್ರದಲ್ಲಿ ಬಹಳಷ್ಟು ಅರ್ಥವಿಲ್ಲದ ತಿರುವುಗಳೂ ಇವೆ.

ಚಿತ್ರದಲ್ಲಿ ಸಂಭಾಷಣೆಗಳ ಕೊರತೆಯಿದೆ ಹಾಗೂ ನಿರ್ದೇಶಕರು ಅವುಗಳನ್ನು ಬೇಕಾದ ಜಾಗಗಳಲ್ಲಿ ಉಪಯೋಗಿಸಲಿಲ್ಲ. ಲೆಕ್ಕಕಿಂತ ಜಾಸ್ತಿನೇ ಸ್ಲೋ ಮೋಷನ್ ಸೀನ್ಸ್ ಗಳಿವೆ ಮತ್ತೆ ಇವೆಲ್ಲ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ!

ಚಿತ್ರದ ತಾರಾಗಣ ಅಂತೂ ಚೆನ್ನಾಗೇ ಇದೆ. ಸಲ್ಮಾನ್ ಖಾನ್ ಎಂದಿನಂತೆಯೇ ಅವರ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ನಟನೆಯ ಬಗ್ಗೆ ಹೇಳುವುದೇ ಬೇಡ ಏಕೆಂದರೆ ಅದು ಅಷ್ಟು ಅದ್ಭುತವಾಗಿದೆ! ಚುಲ್ಬುಲ್ ಪಾಂಡೆಯ ಪತ್ನಿಯಾಗಿ ಸೋನಾಕ್ಷಿ ಸಿನ್ಹಾ ಚೆನ್ನಾಗಿ ನಟಿಸಿದ್ದಾರೆ. ಸಾಯಿ ಮಂಜರೇಕರ್ ಒಂದು ಹೊಸ ಅಭಿನಯದಲ್ಲಿ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ.

ಚಿತ್ರದ ಸಂಗೀತವು ಒಂದು ದೊಡ್ಡ ಪ್ಲಸ್ ಪಾಯಿಂಟ್ ಎಂದು ಹೇಳಬಹುದು. ನಿಮ್ಮನ್ನು ಸ್ಟೆಪ್ಪು ಹಾಕಿ ಕುಣಿಯಲು ಪ್ರೇರೇಪಿಸುವಂತಹ “ಅಣ್ಣ ಕೈ ಜಾರಿ ಹೋದ”, “ಹುಡ್ ಹುಡ್ ದಬಾಂಗ್” ಮತ್ತು “ಹೂo ಅನುವೆ” ಅನ್ನುವ ಹಾಡುಗಳಿವೆ. ಸಂಜಿತ್ ಹೆಗ್ಗಡೆ ಅವರ ಸುಮಧುರವಾದ ಕಂಠದಲ್ಲಿರುವ “ಕನ್ಯೆಯ ಕಣ್ಣೋಟಕ್ಕೆ” ಅನ್ನುವ ಹಾಡು ನಿಮ್ಮನ್ನು ಮಾಯಾಲೋಕಕ್ಕೆ ಕೊಂಡೊಯ್ಯುತ್ತದೆ! ಈ ಎಲ್ಲಾ ಹಾಡುಗಳ ಸಾಹಿತ್ಯಗಳನ್ನು ಅನೂಪ್ ಭಂಡಾರಿ ಅವರು ಅದ್ಭುತವಾಗಿ ಬರೆದಿದ್ದಾರೆ.

ಚಿತ್ರದ ಡಬ್ಬಿಂಗ್ ಕ್ವಾಲಿಟಿ ಚೆನ್ನಾಗಿ ಮೂಡಿಬಂದಿದೆ. ಟ್ರೈಲರ್ ನಲ್ಲಿ ಸಲ್ಮಾನ್ ಖಾನ್ ಅವ್ರೇ ಕನ್ನಡ ದಲ್ಲಿ ವಾಯ್ಸ್ ಕೊಟ್ಟಿದ್ದಕ್ಕೆ ಸಾಕಷ್ಟು ಜನರು ಕಾಮಿಡಿ ಥರ ಇರುತ್ತೆ, ಅದು ಕನ್ನಡಕ್ಕೆ ಅವಮಾನ ಆದ ಹಾಗೆ ಅಂತ ಎಲ್ಲ ಹೇಳಿ ಟೀಕೆ ಮಾಡಿದರು. ಆದರೆ ಈ ಚಿತ್ರದಲ್ಲಿ ಎಲ್ಲೂ ಅವರು ತಮ್ಮ ವಾಯ್ಸ್ ಕೊಟ್ಟಿಲ್ಲ. ಸಲ್ಮಾನ್ ವಾಯ್ಸ್ ನಂತೆಯೇ ಇರೋ ಕಲಾವಿದರು ಕೊಟ್ಟಿದ್ದಾರೆ. ಹಾಗಾಗಿ ಟ್ರೈಲರ್ ನಂತೆಯೇ ವಾಯ್ಸ್ ಇರತ್ತೆ ಅಂತ ಅನ್ಕೊಂಡು ನೀವು ಚಿತ್ರವನ್ನು ನೋಡುವುದಿಲ್ಲ ಅಂತ ಯೋಚಿಸಿದ್ರೆ ದಾಯವಿಟ್ಟು ನಿಮ್ಮ ಯೋಚನೆ ಬದಲಿಸಿ ಈ ಚಿತ್ರ ಕನ್ನಡದಲ್ಲೇ ನೋಡಿ ಡಬ್ಬಿಂಗ್ ಬೆಂಬಲಿಸಿ!

ಒಟ್ಟಿನಲ್ಲಿ ಹೇಳುವುದಾದರೆ ಈ ಚಿತ್ರದಲ್ಲಿ ಹೊಸದೇನಿಲ್ಲ, ಆಕ್ಷನ್ ಜಾಸ್ತಿ ಇದೆ ಆದರೆ ಎಂಟರ್ಟೈನ್ಮೆಂಟ್ ಗೋಸ್ಕರ ಕುಟುಂಬದೊಂದಿಗೆ ನೋಡಬಹುದಾದ ಒಂದು ಟೈಂ ಪಾಸ್ ಚಿತ್ರ ಆಗಿರುತ್ತದೆ.

ದಿ ಶಯ್ ಗಯ್ಸ್ ರೇಟಿಂಗ್:
⭐⭐½

Leave a comment

Design a site like this with WordPress.com
Get started
search previous next tag category expand menu location phone mail time cart zoom edit close